ತಾಯಿನಾಡು
ಕರ್ನಾಟಕದಲ್ಲಿ ಪ್ರಕಟವಾಗುತ್ತಿದ್ದ ಒಂದು ಕನ್ನಡ ದಿನಪತ್ರಿಕೆ, ಎಂ. ವೆಂಕಟಕೃಷ್ಣಯ್ಯ, ಟಿ. ಪ್ರಕಾಶಂ ಇವರಿಂದ ಪತ್ರಿಕೋದ್ಯಮದಲ್ಲಿ ಪರಿಶ್ರಮವನ್ನೂ ಸ್ಫೂರ್ತಿಯನ್ನೂ ಪಡೆದಿದ್ದ ಪಿ, ಆರ್, ರಾಮಯ್ಯನವರು ಇದನ್ನು ಮೊದಲು ಮೈಸೂರಿನಲ್ಲಿ 1927ರಲ್ಲಿ ಆರಂಭಿಸಿ ಅನಂತರ ಬೆಂಗಳೂರಿಗೆ ವರ್ಗಾಯಿಸಿದರು. ಆಗಿನ ಕಾಲದಲ್ಲಿ ಪತ್ರಿಕೋದ್ಯಮ ಅತ್ಯಂತ ಕಷ್ಟಕರವಾಗಿತ್ತು. ಮೈಸೂರು ಸಂಸ್ಥಾನಾಧೀಶರು ಬ್ರಿಟಿಷ್ ಸಾರ್ವಭೌಮತ್ವಕ್ಕೆ ಅಧೀನರಾಗಿದ್ದುದರಿಂದ ಪ್ರತಿಕೋದ್ಯಮ ಒಂದು ಕಡೆ ರಾಜಪ್ರಭುತ್ವಕ್ಕೂ ಇನ್ನೊಂದು ಕಡೆ ಬ್ರಿಟಿಷ್ ಆಡಳಿತದ ಕ್ರೂರ ಕ್ರಮಗಳಿಗೂ ಒಳಗಾಗಿತ್ತು. ಆದರೂ ರಾಮಯ್ಯನವರು ಧೈರ್ಯಗೆಡದೆ ಪತ್ರಿಕೆಯನ್ನು ಪ್ರಾರಂಭಿಸಿದರು. ಹತ್ತಾರು ಅಭಿಮಾನಿಗಳ ಸಹಾಯದಿಂದ ಮುದ್ರಣ ಯಂತ್ರವನ್ನು ಪಡೆದು ಸ್ವಂತ ಮುದ್ರಣಾಲಯವನ್ನು ಬೆಂಗಳೂರಿನ ಕಿಲಾರಿ ರಸ್ತೆಯಲ್ಲಿ ನೆಲೆಗೊಳಿಸಿ, ನಾಲ್ಕು ಪುಟಗಳ ದಿನಪತ್ರಿಕೆಯನ್ನು ಸಂಪಾದಿಸಿ ಪ್ರಕಟಿಸತೊಡಗಿದರು. ಆಗ ದೇಶವಿದೇಶಗಳ ಸುದ್ದಿಗಳು ರಾಯಿಟರ್ ಮತ್ತು ಅಸೋಸಿಯೇಟೆಡ್ ಪ್ರೆಸ್ ಆಫ್ ಇಂಡಿಯ ಸಂಸ್ಥೆಗಳಿಂದ ಒದಗಿಬರುತ್ತಿದ್ದುವು. ಸಣ್ಣ ಪತ್ರಿಕೆಗಳಿಗೆ ರಿಯಾಯಿತಿ ದರದಲ್ಲಿ ಇವನ್ನೊದಗಿಸುವ ಸೌಲಭ್ಯವನ್ನು ತಾಯಿನಾಡು ದಿನಪತ್ರಿಕೆ ಪಡೆದು ಪತ್ರಿಕಾರಂಗದಲ್ಲಿ ಇನ್ನೊಂದು ಹೆಜ್ಜೆ ಮುಂದಿಟ್ಟಿತು. ತಂತಿ ವಾರ್ತೆಗಳನ್ನು ತರಿಸಿಕೊಳ್ಳತೊಡಗಿದ ಮೊಟ್ಟ ಮೊದಲ ಕನ್ನಡ ಪತ್ರಿಕೆ ತಾಯಿನಾಡು. ಆ ಪತ್ರಿಕಾಲಯದಲ್ಲಿ ತಮ್ಮ ನೇತೃತ್ವದಲ್ಲಿ ತರಬೇತು ಪಡೆದ ಪಿ. ಬಿ. ಶ್ರೀನಿವಾಸನ್ ಅವರನ್ನು ರಾಮಯ್ಯನವರು ಅನಂತರ ಅದರ ಸಂಪಾದಕರನ್ನಾಗಿ ನೇಮಿಸಿದರು.

ಪತ್ರಿಕೆಯದು ರಾಷ್ಟೀಯ ನೀತಿಯಾಗಿತ್ತು. ಭಾರತದ ಸ್ವಾತಂತ್ರ್ಯ ಸಂಪಾದನೆ, ಮೈಸೂರು ರಾಜ್ಯದಲ್ಲಿ ಜವಾಬ್ದಾರಿ ಸರ್ಕಾರದ ಸ್ಥಾಪನೆ, ರಾಜಕೀಯದಲ್ಲಿ ಪರಿಶುದ್ಧತೆ, ಜನಜೀವದಲ್ಲಿ ಪ್ರಾಮಾಣಿಕ ಭಾವನೆ, ವ್ಯಾಪಾರ ವಾಣಿಜ್ಯ ವಲಯಗಳಲ್ಲಿ ಶಿಷ್ಟಾಚಾರ, ಸಕಲರಿಗೂ ಜಾತಿ ಮತ ವರ್ಗ ಭೇದವಿಲ್ಲದೆ ಸನ್ಮಂಗಳವಾಗಲೆಂಬ ಬಯಕೆ - ಇಂಥ ಧ್ಯೇಯಗಳಿಂದ ತಾಯಿನಾಡು ಪತ್ರಿಕೆ ಜನಾನುರಾಗ ಪಡೆಯಿತು. ಜನಸಾಮಾನ್ಯರಿಗೆ ಅರ್ಥವಾಗುವ ತಿಳಿಗನ್ನಡ ಶೈಲಿಯಲ್ಲಿ ಸಂಪಾದಕೀಯವನ್ನು ಇದು ಪ್ರಕಟಿಸುತ್ತಿತ್ತಲ್ಲದೆ, ವರದಿ ನಿರೂಪಣೆಗಳಲ್ಲೂ ಸುಲಭ ಶೈಲಿಯನ್ನನುಸರಿಸಿ ಎಲ್ಲರ ಮೆಚ್ಚುಗೆಗೂ ಪಾತ್ರವಾಯಿತು.
1930-35ರಲ್ಲಿ ಪತ್ರಿಕೆಯಲ್ಲಿ ಹೊಸ ಹೊಸ ಪ್ರಯೋಗಗಳು ನಡೆದುವು. ಕೇಂದ್ರ ಶಾಸನ ಸಭೆಯ ದಿನದಿನದ ಕಾರ್ಯಕಲಾಪಗಳನ್ನು ವರದಿ ಮಾಡಲು ದೆಹಲಿಗೆ ಕಚೇರಿಯ ಪ್ರತಿನಿಧಿಗಳನ್ನು ಪತ್ರಿಕೆ ಕಳುಹಿಸಿ ಕೊಟ್ಟಿತು. ಲಾಬಿ ವರದಿ, ನಗರ ಸಂಚಾರಿಯ ಡೈರಿ, ಜನರ ನಿತ್ಯ ಸಂಕಟಗಳ ವರದಿ -- ಇವು ಪತ್ರಿಕೆಯ ವೈಶಿಷ್ಟ್ಯವನ್ನು ಹೆಚ್ಚಿಸಿದುವು; ಇವುಗಳಿಂದ ಪತ್ರಿಕೆ ಮೇಲುದರ್ಜೆ ಸಂಪಾದಿಸಿಕೊಂಡಿತು.

ತಾಯಿನಾಡು ಪತ್ರಿಕೆ ಆರಂಭವಾದಾಗ ಪತ್ರಿಕಾಶಾಸನವಿರಲಿಲ್ಲ. ಸರ್ಕಾರದ ಅನುಮತಿಪತ್ರ ದೊರಕಿಸಿಕೊಡು ಪತ್ರಿಕೆಯನ್ನು ಆರಂಭಿಸಬೇಕಾಗಿತ್ತು. ಹಳೆಯ ಮೈಸೂರು ಕಾಂಗ್ರೆಸ್ಸಿನ ಜವಾಬ್ದಾರಿ ಸರ್ಕಾರ ಹೋರಾಟಕ್ಕೂ ಭಾರತದ ಸ್ವಾತಂತ್ರ ಚಳವಳಿಗೂ ಪತ್ರಿಕೆ ಪೂರ್ಣ ಬೆಂಬಲ ನೀಡಿತು. 1938ರಲ್ಲಿ ವಿದುರಾಶ್ವತ್ಥದ ಗಲಭೆ ಸಂದರ್ಭದಲ್ಲಿ ಸರ್ಕಾರದವರು ಪತ್ರಿಕೆಯನ್ನು ನಿಲ್ಲಿಸಿಬಿಟ್ಟರು. ಅನಂತರ ಮತ್ತೆ ಅದಕ್ಕೆ ಅನುಮತಿ ದೊರಕಿತು. 1942ರ ಚಳವಳಿಯಲ್ಲಿ ಸಂಪಾದಕರು ಸೆರೆ ವಾಸವನನ್ನನುಭವಿಸಿದರು. 1947ರ ಮೈಸೂರು ಚಲೋ ಚಳವಳಿಯ ಕಾಲಕ್ಕೆ ಸೆನ್ಸಾರ್ ಷಿಪ್ ಆಜ್ಞೆಯ ಫಲವಾಗಿ ಪತ್ರಿಕೆಯನ್ನು ನಿಲ್ಲಿಸಿಬೇಕಾಯಿತು.

1936ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ವಿದೇಶ ಯಾತ್ರೆ ಕೈಗೊಂಡಾಗ ಪತ್ರಿಕೆ ಸ್ವಂತ ಖರ್ಚಿನಲ್ಲಿ ತನ್ನ ಬಾತ್ಮೀದಾರರನ್ನು ಅವರೊಂದಿಗೆ ವಿದೇಶಗಳಿಗೆ ಕಳುಹಿಸಿಕೊಟ್ಟಿತು. ಈ ಬಾತ್ಮೀದಾರರು ಆ ಸಮಯದಲ್ಲಿ ಇಂಗ್ಲೆಂಡ್ ಮತ್ತು ಇತರ ಐರೊಪ್ಯ ದೇಶಗಳ ಪತ್ರಿಕೆಗಳು ನಡೆಯುವ ಬಗೆಯನ್ನು ಅರಿತುಕೊಂಡುಬಂದರು. 1946ರಲ್ಲಿ ತಾಯಿನಾಡು ಬಾತ್ಮಿದಾರರಿಗೆ ಯುದ್ಧ ವರದಿಗೆ ಆಹ್ವಾನ ಬಂದಿತ್ತು. 1952ರಲ್ಲಿ ಅಮೆರಿಕ ಸರ್ಕಾರ ಸ್ಮಿತ್ ಮಾಂಟ್ ಅನುದಾನ ನೀಡಿ ಪತ್ರಿಕೆಯ ಬಾತ್ಮೀದಾರರನ್ನು ಆ ದೇಶಕ್ಕೆ ಕರೆಸಿಕೊಂಡಿತು.

ಮೊದಮೊದಲು ಪತ್ರಿಕೆಯ ವ್ಯವಸ್ಥಾಪನೆಗೆ ರಾಮಯ್ಯನವರೂ ಅವರ ಪತ್ನಿ, ಜಯಲಕ್ಷಮ್ಮನವರೂ ಸೋದರರೂ ಕುಟುಂಬ ವರ್ಗದ ಇತರರೂ ದುಡಿದರು, ಅವರ ಮನೆಯ ಹುಡುಗರು ಪತ್ರಿಕೆಗಳನ್ನು ಮಾರಾಟ ಮಾಡಿ, ಪತ್ರಿಕೆಯ ಯಶಸ್ಸಿಗೆ ಕಾರಣರಾದರು. ಪತ್ರಿಕೆಯ ಪ್ರಸಾರ, ಜನಪ್ರಿಯತೆ ಅಧಿಕವಾದಂತೆಲ್ಲ ಮುದ್ರಣ ಸೌಲಭ್ಯಗಳನ್ನೂ ವಿಸ್ತರಿಸಲಾಯಿತು. ರೋಟರಿ ಮುದ್ರಣ ಯಂತ್ರವನ್ನು ಅಳವಡಿಸಲಾಯಿತು. ಅದಕ್ಕೆ ಹೊಸ ಕಟ್ಟಡ ಬಂತು. 1930-34ರಲ್ಲಿ ಕೇವಲ ಇಬ್ಬರು ಮೂವರ ಸಿಬ್ಬಂದಿ ಇದ್ದ ಪತ್ರಿಕೆಗೆ 1950ರ ವೇಳೆಗೆ ಸುಮಾರು 16 ಉಪಸಂಪಾದಕರೂ ವರದಿಗಾರರೂ ಇದ್ದರು. ಕನ್ನಡ ನಾಡಿನ ಮೂಲೆ ಮೂಲೆಗಳಿಗೂ ಪತ್ರಿಕೆಯ ರವಾನೆ ಆಗುತ್ತಿತ್ತು. ಪತ್ರಿಕೆಗೆ ಅನೇಕ ಸ್ಥಳಗಳಲ್ಲಿ ಸ್ವಂತ ಬಾತ್ಮೀದಾರರಿದ್ದರು.

1957ರಲ್ಲಿ ತಾಯಿನಾಡು ಪತ್ರಿಕೆಯ ಒಡೆತನದಲ್ಲಿ ಬದಲಾವಣೆ ಆಯಿತು. ಅದನ್ನು ಎಂ. ಎಸ್. ರಾಮಯ್ಯನವರು ಕೊಂಡರು. ಅನಂತರ ಅನುಕ್ರಮವಾಗಿ ರುಮಾಲೆ ಚೆನ್ನಬಸವಯ್ಯನವರೂ ಟಿ. ಸಿದ್ದಪ್ಪನವರೂ ಅದರ ಸಂಪಾದಕರಾಗಿದ್ದರು. 1969ರಲ್ಲಿ ಪತ್ರಿಕೆ ನಿಂತುಹೋಯಿತು.									(ಪಿ.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ